ದೀವಟಿಗೆ
	 ದೀಪಕ್ಕೆ ಸಮಾನವಾದುದು. ಪಾತ್ರ ಹಾಗೂ ಗಾತ್ರಗಳಲ್ಲಿ ದೀಪಕ್ಕಿಂತ ದೊಡ್ಡದು. ಇದರ ಬಳಕೆ ಕನ್ನಡ ಜನತೆಯಲ್ಲಿ ಪಾರಂಪರಿಕವಾಗಿ ಉಳಿದು ಬಂದಿದೆ. ಮದುವೆ ಮುಂಜಿ, ದೇವರ ಮೆರವಣಿಗೆ ಮುಂತಾದ ಶುಭ ಸಾಮೂಹಿಕ ಸಮಾರಂಭಗಳಲ್ಲಿ ಜೋಡಿ ದೀವಟಿಗೆಯನ್ನು ಶಾಸ್ತ್ರೋಕ್ತವಾಗಿ ಹಗಲೂ ಇರುಳೂ ಬೆಳಗಿಸುವುದು ಸಂಪ್ರದಾಯ. ಇದೊಂದು ಧಾರ್ಮಿಕ ವಿಧಿ, ಪವಿತ್ರ ಸಂಕೇತ ಎಂಬ ನಂಬಿಕೆ ಇದೆ. ದೀಪಪಟ್ಟಿಕಾ ಅಥವಾ ದೀಪವರ್ತಿಕಾ ಎಂಬ ಸಂಸ್ಕøತ ಶಬ್ದದ ತದ್ಭವ ದೀವಟಿಗೆ. ಇದರ ವಿವಿಧ ವಿನ್ಯಾಸ, ಗಾತ್ರಗಳನ್ನು ಸೂಚಿಸುವ ಪಂಜು, ಪತ್ತು, ದೊಂದಿ, ಕಕ್ಕಡ, ಹಿಲಾಲು, ಮಶಾಲು ಮೊದಲಾದವು ಇದರ ಪರ್ಯಾಯ ಶಬ್ದಗಳು. ದೀಪಾನುಂಗೋ ಅತ್ತೆಗೆ ದೀವಟಿಗೆ ನುಂಗೋ ಸೊಸೆ ಎಂಬ ಗಾದೆ ದೀವಟಿಗೆಯ ಗಾತ್ರವನ್ನು ಸೂಚಿಸುತ್ತದೆ.

ಹೆಚ್ಚು ಬೆಳಕು ನೀಡುವ ರಜನೀಕಾಂತ, ವಿದ್ಯುದ್ದೀಪ ಮುಂತಾದ ಆಧುನಿಕ ಉಪಕರಣಗಳಿರುವಾಗಲೂ ಶಾಸ್ತ್ರರೀತ್ಯಾ ದೀವಟಿಗೆಯನ್ನು ಬಳಸುವುದುಂಟು. ಜೋಡಿ ಪಂಜುಗಳನ್ನು ದೇವರಿಗೆ ಬೆಳಗಿ ಪಂಜುಸೇವೆ ಸಲ್ಲಿಸುವ ಸಂಪ್ರದಾಯ ಅನೇಕ ಕಡೆ ಇದೆ. ಆಟದವನಿಗೆ ದೀವಟಿಗೆಯವನ ಮೇಲೆ ಕಣ್ಣು ಎಂಬ ಗಾದೆ ಹಿಂದೆ ನಾಟಕದಲ್ಲಿ ದೀವಟಿಗೆಗಳನ್ನು ಬಳಸುತ್ತಿದ್ದುದಕ್ಕೆ ಸಾಕ್ಷಿಯಾಗಿದೆ. ಈಗಲೂ ತೊಗಲುಗೊಂಬೆಯಾಟದಲ್ಲಿ ದೊಡ್ಡ ದೀವಟಿಗೆಯನ್ನು ಉರಿಸುವುದುಂಟು. ದೇವಸ್ಥಾನಗಳಲ್ಲಿ ದೀವಟಿಗೆ ಹಿಡಿಯುವ ಕೆಲಸ ಕೆಲವರಿಗೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಉತ್ಸವಗಳಲ್ಲಿ, ತೇರು ಆದಾಗ ಅವರು ದೇವರಿಗೆ ದೀವಟಿಗೆ ಸೇವೆ ಮಾಡುತ್ತಾರೆ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ, ಸಾವಿರ ಕೊಳ್ಳಿ ಒಲೆಯಾಗೆ ಉರಿದರೂ ಜೋತ್ಯಮ್ಮ ನಿನ್ನ ಹೋಲ್ಯಾರ? ಇವೇ ಮೊದಲಾದ ಸೂಕ್ತಿಗಳು ಇದರ ಮಹತ್ತ್ವವನ್ನು ಸಾರುತ್ತವೆ. ಪಾಪಾ ಮಾಡಿ ದೀಪಾ ಬಾಯಲ್ಲಿ ಉರುಬು, ದೀಪಾ ತುಂಬು, ದೀಪಾ ತಣ್ಣಗೆ ಮಾಡು - ಇತ್ಯಾದಿ ನುಡಿಗಳೂ ಜನಪದರ ನಂಬಿಕೆಯನ್ನು ಸೂಚಿಸುತ್ತವೆ.

ದೀವಟಿಗೆಯ ಬಳಕೆ ಭಾರತದಲ್ಲಿ ಹೇಗೋ ಹಾಗೆ ಉಳಿದ ಕಡೆಗೂ ಇದ್ದಿತೆನ್ನಲು ಆಧಾರಗಳಿವೆ. ಈಜಿಪ್ಟಿನವರು ಶವಗಳನ್ನು ಸುಗಂಧ ದ್ರವ್ಯಗಳೊಡನೆ ಒಣಗಿಸಿ ಇಟ್ಟುಕೊಂಡು ರಾತ್ರಿಯಲ್ಲಿ ಅವಕ್ಕೆ ಬೆಂಕಿ ಇಟ್ಟು ಉರಿಸುತ್ತಿದ್ದರೆನ್ನಲಾಗಿದೆ.
(ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ